ಕನ್ನಡ ಕಿರುತೆರೆಗೆ ಹೊಸ ಆಯಾಮ ನೀಡಿ, ಕನ್ನಡಿಗರ ಮನಗೆದ್ದಿರುವ ಜೀ ಕನ್ನಡ ಸತತ ನಾಲ್ಕೂವರೆ ವರ್ಷಗಳಿಂದ ನಂಬರ್ ಒನ್ ವಾಹಿನಿ ಎನಿಸಿಕೊಂಡಿದೆ. ವಿಭಿನ್ನ ಧಾರಾವಾಹಿಗಳ ಮೂಲಕ ಮನರಂಜನೆ ನೀಡುತ್ತಿರುವ ಜೀ ಕನ್ನಡ ಈಗ ಮತ್ತೊಂದು ನವಿರಾದ ಪ್ರೇಮಕಥೆ ಹೇಳಲು ಸಜ್ಜಾಗಿದೆ. ಕೆಲವೇ ದಿನಗಳ ಹಿಂದೆ ತೆರೆಕಂಡ “ಅಮೃತಧಾರೆ” ಈಗಾಗಲೇ ಸೂಪರ್ ಹಿಟ್ ಆಗಿದೆ. ಹೊಚ್ಚಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ಗೆ ಕೂಡಾ ವೀಕ್ಷಕರು ಭರ್ಜರಿ ಸ್ವಾಗತ ನೀಡಿದ್ದಾರೆ.
ಹೆಣ್ಣು ಹೆತ್ತವರ ಕನಸಿನ ಕಥೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮಹಾತಿರುವು ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಜೊತೆಗೆ ಗಟ್ಟಿಮೇಳ, ಶ್ರೀರಸ್ತುಶುಭಮಸ್ತು, ಭೂಮಿಗೆಬಂದ ಭಗವಂತ, ಸತ್ಯ, ಪಾರು, ಹಿಟ್ಲರ್ ಕಲ್ಯಾಣ ಧಾರಾವಾಹಿಗಳು ಕೂಡಾ ವೀಕ್ಷಕರ ಮನದಲ್ಲಿ ಅಚ್ಚೊತ್ತಿವೆ. ಕನ್ನಡಿಗರ ಫೇವರೇಟ್ ಚಾನೆಲ್ ಜೀ ಕನ್ನಡದಲ್ಲಿ ಈಗ ಬಹುನಿರೀಕ್ಷಿತ “ಸೀತಾರಾಮ” ಧಾರಾವಾಹಿಯ ಪ್ರಸಾರಕ್ಕೆ ಕ್ಷಣಗಣನೆ ಆರಂಭವಾಗಿದೆ.
ತಂದೆಯಿಲ್ಲದ ಮಗುವಿನ ತೊಳಲಾಟ, ಗಂಡು ದಿಕ್ಕಿಲ್ಲದ ಮನೆಯಲ್ಲಿನ ಸಮಸ್ಯೆ, ಒಂಟಿ ಹೆಣ್ಣು ಅನುಭವಿಸುವ ಕಷ್ಟ, ಆಕೆಯನ್ನು ಸಮಾಜ ನೋಡುವ ರೀತಿ… ಹೀಗೆ ವಿಭಿನ್ನ ಕಥಾ ಹಂದರ ಹೊಂದಿರುವ “ಸೀತಾರಾಮ” ಪ್ರೊಮೊ ಮೂಲಕವೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಸೀತೆಯ ಹೇಳಿಕೊಳ್ಳಲಾಗದ ನೋವಿಗೆ ರಾಮ ಪರಿಹಾರ ನೀಡುವನೆ? ರಾಮ ಸೀತೆಯ ಪ್ರೀತಿಗೆ ಸಿಹಿ ಹೇಗೆ ಸೇತುವೆ ಆಗುತ್ತಾಳೆ? ಜೀವನದಲ್ಲಿ ಪ್ರೀತಿ ಆಗುವುದೇ ಒಂದು ಸಲ ಎಂಬ ರಾಮನ ನಿಲುವು ಬದಲಾಗುವುದೇ? ಎಂಬ ಸಂಗತಿಗಳ ಮೇಲೆ ಕಥೆ ಸಾಗಲಿದೆ.
ಈಗಾಗಲೇ ಸೀತಾ ರಾಮ ಧಾರಾವಾಹಿಯ ಪ್ರೊಮೊಗಳು ಹಾಗೂ ಶೀರ್ಷಿಕೆ ಗೀತೆ ಎಲ್ಲೆಡೆ ವೈರಲ್ ಆಗಿವೆ. ಪ್ರೋಮೋದಲ್ಲಿ ಕಾಣಿಸಿಕೊಳ್ಳುವ ಸಿಹಿಯ ಸಕ್ಕರೆಯಂತ ಮಾತಿಗೆ ಪ್ರೇಕ್ಷಕರು ಮರುಳಾಗಿ, ಮುದ್ದು ಕಂದಮ್ಮನನ್ನು ತಮ್ಮ ಮನೆಗೆ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಸೀತಾರಾಮ ಪ್ರಸಾರದ ದಿನ ಮತ್ತು ಸಮಯ ಯಾವಾಗ ಎಂಬ ವೀಕ್ಷಕರ ಕುತೂಹಲ ತಣಿಸಲೆಂದೇ ಪ್ರತ್ಯೇಕ ಪ್ರೊಮೊ ಮಾಡಿದ್ದು ಈ ಧಾರಾವಾಹಿಯ ಮತ್ತೊಂದು ಹೈಲೈಟ್.
ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದ್ದು, ನಾಯಕಿ ಸೀತಾ ಪಾತ್ರದಲ್ಲಿ ಖ್ಯಾತ ನಟಿ ವೈಷ್ಣವಿ ಗೌಡ, ನಾಯಕ ರಾಮನಾಗಿ ಗಗನ್ ಚಿನ್ನಪ್ಪ ಮತ್ತು ಇವರಿಬ್ಬರಿಗೆ ಸೇತುವೆಯಾಗುವ ಪುಟಾಣಿ ಸಿಹಿ ಪಾತ್ರದಲ್ಲಿ ಡ್ರಾಮಾ ಜೂನಿಯರ್ಸ್ ಖ್ಯಾತಿಯ ರಿತು ಸಿಂಗ್ ಕಾಣಿಸಿಕೊಳ್ಳಲ್ಲಿದ್ದಾರೆ. ಜತೆಗೆ, ಕಿರುತೆರೆ ಹಾಗು ಬೆಳ್ಳಿತೆರೆಯಲ್ಲಿ ತನ್ನದೇ ಆದ ಆಪಾರ ಅಭಿಮಾನಿ ಬಳಗ ಹೊಂದಿರುವ ಖ್ಯಾತ ನಟ ಮುಖ್ಯಮಂತ್ರಿ ಚಂದ್ರು, ಕೆಜಿಎಫ್ ಖ್ಯಾತಿಯ ಅಶೋಕ್, ನಟಿ ಪೂಜಾ ಲೋಕೇಶ್, ಪಿ.ಡಿ.ಸತೀಶ್ಚಂದ್ರ, ಪೂರ್ಣಚಂದ್ರ, ಜೈದೇವ್ ಮೋಹನ್, ಮೇಘನಾ, ಪದ್ಮಕಲಾ ಸೇರಿದಂತೆ ಹಲವರು ಈ ಧಾರಾವಾಹಿಯಲ್ಲಿದ್ದಾರೆ. ಕಿರುತೆರೆಯ ಖ್ಯಾತ ನಿರ್ದೇಶಕ ಕಲಾಗಂಗೋತ್ರಿ ಮಂಜು ಅವರು ಕೂಡಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜೀ ಕನ್ನಡ ನಿರ್ಮಾಣ, ಬಿ.ಮಧುಸೂದನ್ ನಿರ್ದೇಶನದಲ್ಲಿ ಮೂಡಿಬರಲಿರುವ ಸೀತಾರಾಮ ಇದೇ ಜುಲೈ 17 ರಿಂದ ರಾತ್ರಿ 9:30 ಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.