ಶ್ರೀ ದುರ್ಗಾ ಕ್ರೀಯೇಷನ್ಸ್ ವಿಭಿನ್ನ ಕಥಾಹಂದರವುಳ್ಳ “ಕಾದಂಬರಿ” ಎಂಬ ಧಾರಾವಾಹಿಯನ್ನು ಪ್ರೇಕ್ಷಕರೆದುರಿಡಲು ಸಿದ್ಧವಾಗಿದೆ. “ಕಾದಂಬರಿ” ಒಂದು ಕೆಳಮಧ್ಯಮ ವರ್ಗದ ಹುಡುಗಿ. ಹೊರದೇಶಕ್ಕೆ ತೆರಳಿ ದುಡಿದು ಬರುವುದಾಗಿ ಎಂದು ಹೇಳಿ ಹೋದ ಅಪ್ಪನ ಸುಳಿವಿಲ್ಲ. ಇದ್ದೊಬ್ಬ ಪ್ರೀತಿಯ ಅಣ್ಣ ಜೀವನದಲ್ಲಿ ಸೋತು ಸರಾಯಿಯ ಸೆರೆಯಾಗಿದ್ದಾನೆ. ಹೀಗಿರುವಾಗ ತುಂಬು ಕುಟುಂಬಕ್ಕೆ ಆಧಾರವಾಗಿ ಇವಳೊಬ್ಬಳದೇ ದುಡಿಮೆ. ಮನೆಯನ್ನು ನೀಯಂತ್ರಿಸಲು ಹಗಲಿರುಳು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವಳ ಶ್ರದ್ಧೆ, ಪರಿಶ್ರಮ ಕಂಡು ಇವಳ ಬಾಸ್ ಸುದರ್ಶನ್ ಚಕ್ರವರ್ತಿಗೆ ಇವಳ ಮೇಲೆ ಅಭಿಮಾನ, ಅಪಾರ ನಂಬಿಕೆ.
ಮನೆ ಮಗನಂತೆ ದುಡಿತಿರೋ ಕಾದಂಬರಿಗೆ ತನ್ನದೇ ಪುಟ್ಟ ಕನಸಿನ ಗೂಡಿದೆ. ಈಗಿನ ಕಾಲದ ಹುಡಿಗಿಯರಿಗೆಲ್ಲಾ ಬಣ್ಣ-ಬಣ್ಣದ ಕನಸುಗಳಿದ್ದರೆ, ಇವಳಿಗೊಂದೇ ಆಸೆ. ಇವಳ ಮನಸನ್ನ ಅರ್ಥ ಮಾಡಿಕೊಳ್ಳೋ ಒಬ್ಬ ಸಂಗಾತಿಯ ಕೈಹಿಡಿದು, ೨ ಮುದ್ದಾದ ಮಕ್ಕಳನ್ನು ಹೆತ್ತು ಗೃಹಿಣಿಯಾಗಿ ಸಂಸಾರ ತೂಗಿಸಬೇಕು ಅಂತ. ಆದರೆ ಬೆನ್ನೇರಿರೋ ಮನೆ ಜವಾಬ್ದಾರಿ ಇವಳ ಕನಸನ್ನು ನನಸು ಮಾಡುತ್ತಾ? ಎಂಬುದು ಈ ಧಾರಾವಾಹಿಯ ಸಾರಾಂಶ.
“ಎಲ್ಲಾ ಧಾರಾವಾಹಿಗಳಲ್ಲಿ ತೋರಿಸೋ ದ್ವೇಷ ಅಸೂಯೆಗಳ ಕಿತ್ತಾಟವಿಲ್ಲದೆ, ಮಮತೆಗೆ ಕರಗೋ ಮಿಡ್ಲ್ ಕ್ಲಾಸ್ ಫ್ಯಾಮಿಲಿಯ ಹೈಕ್ಲಾಸ್ ಕಥೆ ಇದಾಗಿದೆ” ಎಂದು ಎನ್ನುತ್ತಾರೆ ನಿರ್ದೇಶಕ ದರ್ಶಿತ್ ಭಟ್. ಪ್ರಸಿದ್ಧ ಧಾರಾವಾಹಿಗಳನ್ನು ನೀಡಿರುವ ಗಣಪತಿ ಭಟ್ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸುನಾದ್ ಗೌತಮ್ ಸಂಗೀತ ಸಂಯೋಜನೆ, ಕೃಷ್ಣ ಕಂಚನಹಳ್ಳಿಯವರ ಛಾಯಾಗ್ರಹಣ, ಗಿರೀಶ್ ಚಿತ್ರಕಥೆ ಮತ್ತು ತುರುವೆಕೆರೆ ಪ್ರಸಾದ್ ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ನಾಯಕಿಯಾಗಿ ಪವಿತ್ರ ನಾಯಕ್ ಮತ್ತು ನಾಯಕನಾಗಿ ರಕ್ಷಿತ್ ನಟಿಸುತ್ತಿದ್ದಾರೆ. ನಾಗೇಂದ್ರ ಶಾ, ಮಾಲತಿ ಸರ್ ದೇಶಪಾಂಡೆ, ಸುರೇಶ್ ರೈ, ಗಾಯಿತ್ರಿ ಪ್ರಭಾಕರ್, ಪ್ರಥಮಾ ರಾವ್, ನಿರಂಜನ್, ಶ್ವೇತಾ, ಪ್ರಗತಿ, ಅರ್ಪಿತ, ಪೃಥ್ವಿ ಯುವಸಾಗರ್, ಲಿಖಿತ, ಅಶೋಕ್ ಬಿ.ಎ, ರಾಧಿಕಾ ಶೆಟ್ಟಿ, ಆನಂದ್ ಹೀಗೆ ಹಲವಾರು ಕಲಾವಿದರನ್ನು ಒಳಗೊಂಡಿದೆ ಈ ಧಾರಾವಾಹಿ. “ಕಾದಂಬರಿ”ಇದೇ ೨೩ರಿಂದ ಸೊಮವಾರದಿಂದ ಶನಿವಾರ ಮದ್ಯಾಹ್ನ ೨ಗಂಟೆಗೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.