ಕನ್ನಡದ ನಂಬರ್ 1 ವಾಹಿನಿ ‘ಜೀ ಕನ್ನಡ’ ತನ್ನ ವೀಕ್ಷಕರಿಗೆ ವಿಭಿನ್ನ ರೀತಿಯ ಶೋ, ಧಾರಾವಾಹಿ, ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತಲೇ ನೋಡುಗರಿಗೆ ಹತ್ತಿರವಾಗಿದೆ. ಈ ವಾಹಿನಿಯ ಹೆಮ್ಮೆಯ ಸಿಂಗಿಂಗ್ ರಿಯಾಲಿಟಿ ಶೋ ‘ಸರಿಗಮಪ’ ಈಗಾಗಲೇ 18 ಸೀಸನ್‌ಗಳ ಜೊತೆಗೆ ಚಾಂಪಿಯನ್‌ಶಿಪ್ ಸೀಸನ್ ಕೂಡ ಮಾಡಿದೆ. ಇದೀಗ 19ನೇ ಸೀಸನ್‌ನ ಅಂತಿಮ ಘಟ್ಟ ತಲುಪಿದೆ.
ಈಗಾಗಲೇ ಯಶಸ್ವಿ 47 ಸಂಚಿಕೆಗಳನ್ನ ಪೂರೈಸಿರುವ ‘ಸರಿಗಮಪ’ ಸೀಸನ್ 19ರ ಗ್ರಾಂಡ್ ಫಿನಾಲೆ ಸಂಚಿಕೆಗಳು ಇದೇ ಶನಿವಾರ ಮತ್ತು ಭಾನುವಾರ ಸಂಜೆ 6.30 ರಿಂದ ಪ್ರಸಾರವಾಗಲಿದೆ. ಸಾವಿರಾರು ಜನರ ಮಧ್ಯೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರ್ಯಾಂಡ್ ಫಿನಾಲೆ ಚಿತ್ರೀಕರಣ ಯಶಸ್ವಿಯಾಗಿ ಜರುಗಿದೆ . ಅಷ್ಟೇ ಅಲ್ಲದೆ ಈ ಅದ್ಧೂರಿ ಸ್ವರ ಸಮರದಲ್ಲಿ ಗೆಲುವಿನ ಕಿರೀಟ ಯಾರ ಮುಡಿಗೇರಲಿದೆ ಎಂಬ ಕೂತೂಹಲದಿಂದ ವೀಕ್ಷಕರು ಕಾರ್ಯಕ್ರಮವನ್ನು ಎದುರು ನೋಡುವಂತಾಗಿದೆ .
ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿರುವ ಸರಿಗಮಪ ಎಂದಿನಂತೆ ಈ ಬಾರಿಯೂ ಕರ್ನಾಟಕದ ಮೂಲೆಮೂಲೆಯಿಂದ ವಿವಿಧ ಪ್ರತಿಭೆಗಳನ್ನು ಹೆಕ್ಕಿ ತಂದು ಕನ್ನಡಿಗರಿಗೆ ಪರಿಚಯಿಸಿ ಸಾರ್ಥಕತೆ ಗಳಿಸಿದೆ.
ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಮತ್ತು ಮಹಾಗುರುಗಳಾದ ಹಂಸಲೇಖ ಅವರು ಈ ಕಾರ್ಯಕ್ರಮದ ಯಶಸ್ಸಿನ ರೂವಾರಿ ಎಂದು ಹೇಳಿದರೂ ತಪ್ಪಾಗಲಾರದು. ನಾಡಿನ ಹೆಸರಾಂತ ಗಾಯಕ, ಗಾಯಕಿಯರು ತೀರ್ಪುಗಾರರ ಜೊತೆ ಮೆಂಟರ್‌ಗಳಾಗಿ ತಮ್ಮ ತಂಡದ ಪ್ರತಿಯೊಬ್ಬ ಸ್ಪರ್ಧಿಯನ್ನೂ ತಿದ್ದಿ ತೀಡಿ, ಅವರಲ್ಲಿರುವ ವಿಶೇಷ ಪ್ರತಿಭೆಯನ್ನು ವೇದಿಕೆಯ ಮೇಲೆ ಪ್ರಸ್ತುತಪಡಿಸುವಲ್ಲಿ ಶ್ರಮವಹಿಸಿದ್ದಾರೆ. ನಿರೂಪಕಿ ಅನುಶ್ರೀ ಅವರು ಸರಿಗಮಪ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದಾರೆ .
ರಮೇಶ್ ಅರವಿಂದ್ ಅವರು ಶಿವಾಜಿ ಸುರತ್ಕಲ್ ಸಿನಿಮಾ ತಂಡದ ಜೊತೆ ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿ ವೇದಿಕೆಯ ಮೆರಗನ್ನು ಹೆಚ್ಚಿಸಿದ್ದಾರೆ .
ಅಂತಿಮ ಟಾಪ್ 6 ಸ್ಪರ್ಧಿಗಳಾಗಿ ಮಂಗಳೂರಿನ ತನುಶ್ರೀ, ಬೆಂಗಳೂರಿನ ಕುಷಿಕ್, ಮೈಸೂರಿನ ಗುರುಪ್ರಸಾದ್, ಉಡುಪಿಯ ಶಿವಾನಿ ನವೀನ್ ಕೊಪ್ಪ, ಸೊಲ್ಲಾಪುರದ ರೇವಣಸಿದ್ಧ ಮತ್ತು ಕುಶಾಲನಗರದ ಪ್ರಗತಿ ಬಡಿಗೇರ್ ಇದ್ದು ಸಂಗೀತ ಹಣಾಹಣಿಯಲ್ಲಿ ವಿಜಯಲಕ್ಷ್ಮೀ ಯಾರ ಪಾಲಾಗಲಿದ್ದಾಳೆ ಎನ್ನುವುದನ್ನು ಕಾದುನೋಡಬೇಕಿದೆ.