ತುಂಬು ಕುಟುಂಬದ ಕಥೆ ಲಕ್ಷ್ಮೀ ನಿವಾಸ- ಮನೆಮನಗಳಿಗೆ ಪ್ರವೇಶ ಮಾಡಲು ಸಿದ್ಧ! – ಲಕ್ಷ್ಮೀ ನಿವಾಸ
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅನ್ನುವ ಲೋಕರೂಢಿಯ ಮಾತನ್ನೇ ಎಳೆಯಾಗಿಟ್ಟುಕೊಂಡು ಕಥೆಯನ್ನು ಹೆಣೆದಿರುವ ಜೀ಼ ಕನ್ನಡ ವಾಹಿನಿ, ಹೊಸ ಧಾರಾವಾಹಿ ‘ಲಕ್ಷ್ಮೀ ನಿವಾಸ’ವನ್ನು ಕರುನಾಡಿನ ಮನೆಮನಗಳಿಗೆ ಪ್ರವೇಶ ಮಾಡಿಸಲು ತಯಾರಿ ಮಾಡಿಕೊಂಡಿದೆ. ಈ ಮೂಲಕ, ಮಧ್ಯಮ ವರ್ಗದ ಮನೆಮನೆಯ ಕಥೆಯನ್ನು, ಸಹಜ ನಿರೂಪಣೆಯೊಂದಿಗೆ ವೀಕ್ಷಕರ ಮುಂದಿಡಲಿದೆ.
ತುಂಬುಕುಟುಂಬ, ಒಂದು ಮನೆಯಲ್ಲಿ ನಾಲ್ಕು ತಲೆಮಾರಿನ ವಿಭಿನ್ನ ಪಾತ್ರಗಳು. ಒಬ್ಬೊಬ್ಬರದು ಒಂದೊಂದು ಆಸೆ, ಕನಸು, ವ್ಯಕ್ತಿತ್ವ. ಈ ಮಧ್ಯೆ, ಮನೆಯನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವ ಬಯಕೆಯ ಲಕ್ಷ್ಮೀ- ಶ್ರೀನಿವಾಸ. ಹೀಗೆ ಕೂಡು ಕುಟುಂಬದ ಜೀವನಾನುಭವವನ್ನು ನೀಡುವ ಚಂದದ ಕಥಾಹಂದರ ಈ ಧಾರಾವಾಹಿಯಲ್ಲಿ ಇರಲಿದೆ. ಮಧ್ಯಮ ವರ್ಗದ ಜನರು ತಮ್ಮ ಕನಸು ನನಸಾಗಿಸಲು ಜೀವನಪೂರ್ತಿ ಅನುಭವಿಸುವ ಕಷ್ಟ- ಸುಖ, ನೋವು- ನಲಿವಿನೊಂದಿಗೆ ಸವೆಸುವ ಬದುಕಿನ ಹಾದಿ ಈ ಕಥೆಯ ತಿರುಳಾಗಿರಲಿದೆ.
ಪ್ರತಿನಿತ್ಯ ನಮ್ಮೆಲ್ಲರ ಬದುಕಿನಲ್ಲಿ ನಡೆಯುವ ಮಾಸ್ ಕಥೆಗೆ ಕ್ಲಾಸ್ ನಿರೂಪಣೆ, ಜೊತೆಗೆ ಹಳ್ಳಿಯ ರಾಜಕಾರಣ, ಕಾಲೇಜು ಲವ್ ಸ್ಟೋರಿ ಈ ಧಾರಾವಾಹಿಯ ಹೈಲೈಟ್. ಕಿರುತೆರೆಯ ಮೂಲಕ ಮತ್ತೆ ಕನ್ನಡ ಮನೋರಂಜನಾ ಲೋಕಕ್ಕೆ ಶ್ವೇತಾ ಚೈತ್ರದ ಪ್ರೇಮಾಂಜಲಿಯ ಮೂಲಕ ಕನ್ನಡಿಗರಿಗೆ ಪರಿಚಯವಾಗಿ, ಚಿತ್ರರಂಗದ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿ, ಹೆಸರುಗಳಿಸಿದ್ದ ಬಹುಭಾಷಾ ನಟಿ ಶ್ವೇತಾ, ಈ ಧಾರಾವಾಹಿಯ ಮೂಲಕ ಮತ್ತೆ ಕನ್ನಡ ಮನೋರಂಜನಾ ಮಾಧ್ಯಮಕ್ಕೆ ಕಾಲಿಟ್ಟಿದ್ದಾರೆ.
‘ಲಕ್ಷ್ಮೀ ನಿವಾಸ’ದಲ್ಲಿ ಕಲಾವಿದರ ದಂಡು!
ಕಿರುತೆರೆಯಲ್ಲಿ ಈ ಹಿಂದೆ ಹೀರೋ ಹೀರೋಯಿನ್‌ಗಳಾಗಿ ಮಿಂಚಿ, ವಿರಾಮ ತೆಗೆದುಕೊಂಡಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಯುವಕಲಾವಿದರ ಮೆರುಗೂ ಇಲ್ಲಿರಲಿದೆ. ವಿಶೇಷ ಎಂಬಂತೆ ಕನ್ನಡ ಬೆಳ್ಳಿತೆರೆಯ ನಟ- ನಟಿಯರು ಲಕ್ಷ್ಮೀ ನಿವಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೊಮೋದಲ್ಲಿ ಕಾಣಿಸಿಕೊಂಡಿರುವ ಪಾತ್ರಗಳ ಹೊರತಾಗಿ, ಇನ್ನೂ ಬಹಳಷ್ಟು ಕಲಾವಿದರು ಕಾಣಿಸಿಕೊಳ್ಳುವುದು ಬಾಕಿ ಇದೆ. ಅವರು ಯಾರ್ಯಾರು, ಪಾತ್ರ ಏನೇನು ಅಂತ ತಿಳಿಯಲು ಧಾರಾವಾಹಿಗಾಗಿ ಕಾಯಬೇಕು. ಸಾಯಿ ನಿರ್ಮಲ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ ಇರಲಿದೆ.
ಜನವರಿ 16ರಿಂದ ಸೋಮ- ಶುಕ್ರ ರಾತ್ರಿ 8ಕ್ಕೆ ಪ್ರಸಾರ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೇ ಜನವರಿ 16 ರಿಂದ ಸೋಮವಾರ ದಿಂದ- ಶುಕ್ರವಾರದ ವರೆಗೆ ರಾತ್ರಿ 8ಕ್ಕೆ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ.