ಈ ಸಂಕ್ರಾಂತಿಗೆ ಜೀ ಕನ್ನಡದಲ್ಲಿ ಸಂಜೆ 7 ಹಾಗೂ 7.30ಕ್ಕೆ ಪ್ರಸಾರ ಮಾಡುವ “ಕಮಲಿ ಮತ್ತು “ಪಾರು” ಧಾರಾವಾಹಿಗಳ ಮಹಾ ಸಂಗಮ ನಡೆಯಲಿದೆ. “ಸಂಕ್ರಾಂತಿ ಸಂಗಮ” ಎಂಬ ಕಾರ್ಯಕ್ರಮದಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಹಾಗೂ ಅನ್ನಪೂರ್ಣ ಮಹಾಜನ್ ಇಬ್ಬರೂ ಪರಸ್ಪರ ಭೇಟಿಯಾಗಿ ಮಾತನಾಡಿಕೊಂಡು ಸಂಕ್ರಾಂತಿ ಕಾರ್ಯಕ್ರಮವನ್ನು ಒಟ್ಟಾಗಿ ಆಚರಿಸಲಿದ್ದಾರೆ. ಈ ಇಬ್ಬರೂ ಎರಡೂ ಧಾರಾವಾಹಿಗಳ ಜನಪ್ರಿಯ ಐಕಾನ್ ಪಾತ್ರಗಳಾಗಿದ್ದು ಅರಸನಕೋಟೆ ಅಖಿಲಾಂಡೇಶ್ವರಿಯಾಗಿ ವಿನಯಾ ಪ್ರಸಾದ್ ಹಾಗೂ ಅನ್ನಪೂರ್ಣ ಮಹಾಜನ್ ಆಗಿ ಪದ್ಮಾ ವಾಸಂತಿ ತಮ್ಮ ಛಾಪು ಮೂಡಿಸಿದ್ದಾರೆ. ಇಬ್ಬರೂ ಪರಸ್ಪರ ಎದುರಾಗುತ್ತಿರುವುದು ವೀಕ್ಷಕರಿಗೆ ನಿಜಕ್ಕೂ ಸಂಕ್ರಾಂತಿಯ ಸಂಭ್ರಮ ಹೆಚ್ಚಿಸಲಿದೆ.
ಸದಾ ವಿನೂತನ ಕಾರ್ಯಕ್ರಮಗಳನ್ನು ರೂಪಿಸುವ ಜೀ ಕನ್ನಡ ಈ ಬಾರಿ ಸಂಕ್ರಾಂತಿಗೆ ಅಷ್ಟೇ ಸಂಭ್ರಮ, ವಿನೂತನ ಕಾರ್ಯಕ್ರಮವನ್ನು ವೀಕ್ಷಕರಿಗೆ ತಂದಿದೆ. ಜೀ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳ ಪಾತ್ರಗಳು ಪರಸ್ಪರ ಭೇಟಿಯಾಗಿ ಸಂಕ್ರಾಂತಿಯ ಹಬ್ಬದ ಉತ್ಸಾಹ ಹೆಚ್ಚಿಸಲಿದ್ದಾರೆ.
ಎರಡೂ ಕುಟುಂಬಗಳು ದೊಡ್ಡದೊಂದು ಭೂಮಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಎದುರಾಗುತ್ತವೆ. ಅವರಿಬ್ಬರೂ ಒಂದು ದೊಡ್ಡ ಉದ್ಯಮ ನಿರ್ಮಿಸಲು ಸಜ್ಜಾಗಿರುತ್ತಾರೆ. ಕಥೆಯೊಳಗೊಂದು ಕಥೆಯು ಎರಡೂ ತಂಡಗಳ ಸಂಕ್ರಾಂತಿ ಸಂಭ್ರಮಕ್ಕೆ ಕಾರಣವಾಗುವ ತಿರುವೇ ರೋಚಕವಾಗಿದೆ. ಎರಡೂ ಕುಟುಂಬಗಳು ಭೂಮಿ ಕೊಳ್ಳುವ ನಿಟ್ಟನಲ್ಲಿ ಇಬ್ಬರಿಗೂ ಪೈಪೋಟಿ ಏರ್ಪಡುತ್ತದೆ. ಆದರೆ ಇಬ್ಬರೂ ಒಳ್ಳೆಯ ಯೋಜನೆಯೊಂದಕ್ಕೆ ಪ್ರಯತ್ನ ನಡೆಸುತ್ತಿದ್ದರಿಂದ ನಂತರ ರಾಜಿಯಾಗುತ್ತಾರೆ. ಅದಕ್ಕೆ ಯಾರು ಕಾರಣವಾಗುತ್ತಾರೆ, ಆದಿ ಮತ್ತು ಪಾರು ಮಧ್ಯೆ ನಡೆಯುವ ಪ್ರೀತಿಯ ಸಂಬಂಧಕ್ಕೆ ಹೊಸದೊಂದು ಟ್ವಿಸ್ಟ್ ಇದೆ, ರಿಷಿ ಹಾಗೂ ಕಮಲಿ ಮಧ್ಯೆ ಬಂದಿರುವ ಅಂಬಿ ಹೇಗೆ ಅವರ ನಡುವಿನ ಸಂಬಂಧದಲ್ಲಿ ಹೊಸ ತಿರುವನ್ನು ತರುತ್ತಾಳೆ ಎನ್ನುವುದೂ ಮತ್ತೊಂದು ಕುತೂಹಲಕಾರಿ ತಿರುವು ಪಡೆಯಲಿದೆ. ಎರಡೂ ಕುಟುಂಬಗಳು ಸಂಕ್ರಾಂತಿಯಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಕಣದ ಪೂಜೆ, ಕೋಲಾಟ, ನೃತ್ಯ, ಮನೆಯ ಅಲಂಕಾರ ಎಲ್ಲದರಲ್ಲೂ ತೊಡಗಿಕೊಳ್ಳುತ್ತಾರೆ. ಸಂಭ್ರಮದಿಂದ ಸಂಕ್ರಾಂತಿ ಆಚರಿಸುತ್ತಾರೆ. ವೀಕ್ಷಕರಿಗೆ ಮನರಂಜನೆಯ ಮಹಾ ಸಂಭ್ರಮವಾಗುವುದರಲ್ಲಿ ಸಂಶಯವೇ ಇಲ್ಲ.
ಕಮಲಿ, ಪಾರು ಸಂಕ್ರಾಂತಿ ಸಂಭ್ರಮದಲ್ಲಿ ಬೆಳ್ಳಿ ದೀಪ ಗೆಲ್ಲಿರಿ
ವೀಕ್ಷಕರ ಸಂಭ್ರಮ ಹೆಚ್ಚಿಸಲು ಸಂಕ್ರಾಂತಿ ಬೆಳ್ಳಿಹಬ್ಬ ನಡೆಯಲಿದ್ದು ಆ ಬೆಳ್ಳಿಹಬ್ಬದಲ್ಲಿ ಸರಿ ಉತ್ತರ ಕೊಡುವವರಿಗೆ ಬೆಳ್ಳಿ ಕಂಬದ ದೀಪ ದೊರೆಯಲಿದೆ. ಈ ಬೆಳ್ಳಿಹಬ್ಬ ಜನವರಿ 11, ಸೋಮವಾರ ಪ್ರಾರಂಭವಾಗಿ ಜನವರಿ 15, 2021 ಶುಕ್ರವಾರ ಸ್ಪರ್ಧೆ ಪೂರ್ಣಗೊಳ್ಳುತ್ತದೆ. ಇದರಲ್ಲಿ ಪ್ರತಿ ದಿನ ಎಪಿಸೋಡ್ ಕೊನೆಯಲ್ಲಿ ಒಂದು ಪ್ರಶ್ನೆ ಕೇಳಲಾಗುತ್ತದೆ. ಅದಕ್ಕೆ ಮೂರು ಉತ್ತರಗಳನ್ನು ನೀಡಲಾಗುತ್ತದೆ. ಈ ಪ್ರಶ್ನೆಗೆ ವೀಕ್ಷಕರು ಸರಿಯಾದ ಉತ್ತರವನ್ನು 57575 ಸಂಖ್ಯೆಗೆ ಎಸ್.ಎಂ.ಎಸ್. ಮೂಲಕ ಕಳುಹಿಸಬೇಕು. ಪ್ರತಿನಿತ್ಯ ಇಬ್ಬರು ವಿಜೇತರನ್ನು ಆಯ್ಕೆ ಮಾಡಿ ಒಟ್ಟು ಹತ್ತು ಜನ ವಿಜೇತರಿಗೆ ಬೆಳ್ಳಿಯ ಕಂಬದ ದೀಪವನ್ನು ಜೀ ಕನ್ನಡ ನೀಡುತ್ತದೆ.